ಜಲಾನಯನ ಪ್ರದೇಶ -
ಒಂದು ಕೆರೆಗೆ ಅಥವಾ ಕಟ್ಟೆಗೆ ನೀರನ್ನು ಒದಗಿಸುವ ಹರವು (ಕ್ಯಾಚ್‍ಮೆಂಟ್ ಏರಿಯ) ಇದರ ಸರಹದ್ದು ಮೇಲಿನಿಂದ ನೀರನ್ನು ಕೆರೆಗೆ ತರುವ ಭೂಮಿಯ ವಿಸ್ತೀರ್ಣದ ಗಡಿ. ಒಂದು ಕೆರೆಯ ಜಲಾನಯನ ಭೂಮಿಯಲ್ಲೆ ಸಂಗ್ರಹವಾಗುವ ನೀರಿನ ಮೊತ್ತ 1 ಅದರ ಜಲಾನಯನ ಭೂಮಿಯ ವಿಸ್ತೀರ್ಣ, 2 ಅದರ ಮೇಲೆ ಬೀಳುವ ಮಳೆಯ ನೀರಿನ ಗಾತ್ರ ಮತ್ತು 3 ಆ ನೀರಿನಿಂದ ಬಿಸಿಲಿನಲ್ಲಿ ಆವಿಯಾಗಿ ಹೋಗುವ ಮತ್ತು ನೆಲದಲ್ಲೆ ಇಂಗಿಹೋಗುವ ಭಾಗ-ಇವುಗಳ ಮೇಲೆ ಅವಲಂಬಿಸಿದೆ. ಬೀಳುವ ಮಳೆಯಲ್ಲಿ ನೆಲದ ಮೇಲೆ ಹರಿದು ಒಂದು ಹಳ್ಳಕ್ಕೋ ಹೊಳೆಗೋ ಹೋಗಿ ಸೇರಿಕೊಳ್ಳುವ ಅಂಶಕ್ಕೆ ಹರಿದು ಹೋಗುವ ನೀರು ಎಂದು ಹೆಸರು. ಬೀಳುವ ಮಳೆಗೂ ಹರಿದು ಹೋಗುವ ನೀರಿಗೂ ಇರುವ ನಿಷ್ಪತ್ತಿ ವಾಯುಗುಣಕ್ಕೆ ಅನುಗುಣವಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಿಶೇಷವಾಗಿ ವ್ಯತ್ಯಾಸವಾಗುತ್ತದೆ. ಮಲೆನಾಡಿನಲ್ಲಿ ಇದು ಹೆಚ್ಚು. ಬಯಲುಸೀಮೆಯಲ್ಲಿ ಕಡಿಮೆ. 

	ಆವಿಯಾಗಿ ಹೋಗುವ ನೀರಿನ ಅಂಶ -(1) ದಿನದಲ್ಲಿ ಎಷ್ಟು ಗಂಟೆ ಕಾಲ ಬಿಸಿಲು ಕಾಯುತ್ತದೆ (2) ಆ ಪ್ರದೇಶದ ಉಷ್ಣತೆ ಮತ್ತು (3) ವಾಯುವಿನಲ್ಲಿ ತೇವದ ಪ್ರಮಾಣ-ಇವುಗಳಿಗೆ ಅನುಗುಣವಾಗಿ ಉಂಟು. ಈ ಅಂಶಗಳು ವರ್ಷದ ಬೇರೆ ಬೇರೆ ಋತುಗಳಲ್ಲಿ ವ್ಯತ್ಯಾಸವಾಗುತ್ತವೆ. ಒಂದು ವರ್ಷದ ಅವಧಿಯಲ್ಲಿ ಹೆಚ್ಚಾಗಿ ಮಳೆಯಾಗುವ ಭಾಗಗಳಿಗಿಂತ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಈ ನಷ್ಟ ಕಡಿಮೆ. ಆವಿಯಾಗುವ ನೀರಿನ ಮೇಲೆ ಆ ಪ್ರದೇಶದ ವಾಯುಗುಣದ ಪ್ರಭಾವ ವಿಶೇಷವಾಗಿದೆ. ಉಷ್ಣವಲಯದ ದೇಶಗಳಲ್ಲಿ ಬೀಳುವ ಮಳೆಯ ಸ್ವಲ್ಪ ಭಾಗ ಮಾತ್ರ ನೆಲದ ಮೇಲೆ ಹರಿದು ಹಳ್ಳಗಳನ್ನು ಸೇರಿ ನದಿಗಳಿಗೆ ಬೀಳುತ್ತದೆ. ಉಷ್ಣ ದೇಶಗಳಲ್ಲಿ ಒಂದು ಜಲಾಶಯದಿಂದ ಆವಿಯಾಗಿ ಹೋಗುವ ನೀರು ನೆಲದ ಮೇಲಿನಿಂದ ಆವಿಯಾಗಿ ಹೋಗುವ ನೀರಿಗಿಂತ ಬಹಳ ಹೆಚ್ಚಾಗಿರುವುದು. ದಕ್ಷಿಣ ಭಾರತದಲ್ಲಿರುವ ಹಾಗೆ ಜಲಾನಯನ ಭೂಮಿಯಲ್ಲಿ ಅನೇಕ ಕೆರೆಗಳಿದ್ದರೆ ಅದೇ ನೆಲದ ಮೇಲೆ ಹರಿಯುವ ನೀರಿನ ಬಲುಭಾಗವನ್ನು ತಡೆದುಬಿಡುತ್ತದೆ. ಆಗ ಈ ಕೆರೆಗಳ ಕೆಳಗಡೆ ಇರುವ ಜಲಾಶಯವನ್ನು ಸೇರುವ ಮಳೆಯ ನೀರಿನ ಪ್ರಮಾಣ ಬಲು ಕಡಿಮೆ. 

	ಒಂದು ಜಲಾನಯನ ಭೂಮಿಯ ಮೇಲೆ ಬೀಳುವ ಮಳೆಯ ನೀರಿನಿಂದ ನೆಲದಲ್ಲಿ ಹೀರಿಹೋಗುವ ನೀರು ಮೇಲ್ಮೈಯ ಅವಶೋಷಣ ಗುಣವನ್ನೂ ಕೆಳಗಿನ ಸ್ತರಗಳ ರಚನೆಯನ್ನೂ ಅವಲಂಬಿಸಿದೆ. ಈ ಸ್ತರಗಳಲ್ಲಿ ಗಟ್ಟಿಬಂಡೆಗಳಿದ್ದು ನೀರು ಮತ್ತಷ್ಟು ಕೆಳಗಡೆಗೆ ಒಸರಲು ಸಾಧ್ಯವಿಲ್ಲದಾಗ ಹೀರಿಹೋಗುವ ನೀರಿನ ಪ್ರಮಾಣ ಕಡಿಮೆ. ಬದಲು ಅವುಗಳಲ್ಲಿ ಬಂಡೆಗಳೇ ಇಲ್ಲದಿದ್ದಾಗ ಹೀರಿಹೋಗುವ ನೀರಿನ ಪ್ರಮಾಣ ಹೆಚ್ಚು. 

	ಭೂಮಿಯ ಮೇಲ್ಮೈಯಲ್ಲಿ ನೀರು ಇಳಿಯುವ ಹಾಗಿದ್ದು ಅದರ ಕೆಳಗಡೆ ನೀರನ್ನು ಹೀರದೆಯೇ ಇರುವ ಗಟ್ಟಿಬಂಡೆಯಿದ್ದರೆ, ಆ ಬಂಡೆ ಸಿಕ್ಕುವವರೆಗೂ ಮಳೆಯ ನೀರು ಕೆಳಕ್ಕೆ ಇಳಿದು, ಆಮೇಲೆ ನೆಲದ ಕೆಳಗೇ ಬಂಡೆಯ ಕಡಿದಾದ ಇಳಿಜಾರಿನ ಮೇಲೆ ಹರಿದು ನೆಲವನ್ನು ಮುಟ್ಟಿ ಒಂದು ಹಳ್ಳದ ಕಡೆಗೆ ಹೋಗುತ್ತದೆ. ಅಥವಾ ಅನುಕೂಲವಾದ ಸ್ಥಳದಲ್ಲಿ ಬುಗ್ಗೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಅಥವಾ ಮರಳು ಇಲ್ಲವೆ ಗ್ರ್ಯಾವೆಲ್ಲಿನ ಹಾಗೆ ನೀರನ್ನು ಹೀರುವ ದಪ್ಪದಾದ ಪದರಗಳು ಇದ್ದರೆ ಅವು ನೀರನ್ನು ಹೆಚ್ಚಾಗಿ ಹೀರಿ ನೈಸರ್ಗಿಕವಾದ ಭೂಗರ್ಭ ಸರೋವರಗಳಾಗುತ್ತವೆ. ಭೂಮಿಯ ಮೇಲೆ ಮಳೆ ಹೆಚ್ಚಾಗಿ ಬಿದ್ದಾಗ ಈ ಪದರಗಳು ನೀರಿನಿಂದ ತುಂಬಿರುವುವು. ಬೇಸಿಗೆಯಲ್ಲಿ ಈ ನೀರು ನಿಧಾನವಾಗಿ ಹೊರಕ್ಕೆ ಬಂದು ನೆಲದ ಮೇಲಿನ ತೋಡುಗಳಲ್ಲಿ ಹರಿಯುತ್ತದೆ. 

	ಭೂಮಿಯ ಮೇಲ್ಮೈಯಲ್ಲಿ ಮಳೆಯ ನೀರು ಇಳಿಯುವ ಹಾಗಿದ್ದು ಅದರ ಕೆಳಗಡೆಯೂ ನೀರನ್ನು ಹೀರುವ ಅಥವಾ ಪದರಗಳುಳ್ಳ ಬಂಡೆ ಇದ್ದರೆ ಮಳೆಯ ನೀರು ನೆಲದಲ್ಲಿ ಜಿನುಗಿ ಅನುಕೂಲವಾದ ಜಾಗಗಳಲ್ಲಿ ಬುಗ್ಗೆಗಳ ರೂಪದಲ್ಲಿ ಹೊರಕ್ಕೆ ಬರಬಹುದು.									(ಎಚ್.ಸಿ.ಕೆ.; ಜಿ.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ